ಬಾಟ್ಸ್‍ವಾನ		- ದಾಕ್ಷಿಣಾತ್ಯ ಆಫ್ರಿಕದ ಒಂದು ಗಣರಾಜ್ಯ. ಉತ್ತರದಲ್ಲಿ ನಮೀಬಿಯ ಮತ್ತು ಜಾóಂಬಿಯ, ಈಶಾನ್ಯ ಮತ್ತು ಪೂರ್ವದಲ್ಲಿ ಜಿಂಬಾಬ್ವೆ, ಆಗ್ನೇಯ ಮತ್ತು ದಕ್ಷಿಣದಲ್ಲಿ ದಕ್ಷಿಣ ಆಫ್ರಿಕ ಮತ್ತು ಪಶ್ಚಿಮದಲ್ಲಿ ನಮೀಬಿಯ ದೇಶಗಳು ಇದನ್ನು ಸುತ್ತುವರಿದಿವೆ. ಇದಕ್ಕೆ ಸಮುದ್ರತೀರವಿಲ್ಲ. ವಿಸ್ತೀರ್ಣ 5,69,797 ಚಕಿಮೀ. ಜನಸಂಖ್ಯೆ 861.00 (1980). ರಾಜಧಾನಿ ಗ್ಯಾಬರೋನೆ 59,000 (1981).

ಭೌತಲಕ್ಷಣ: ಜಾóಂಬೆಜಿóಯ ಉಪನದಿಯಾದ ಚೋಬೆಯಿಂದ, ಆರೆಂಜ್‍ನ ಉಪನದಿಯಾದ ಮೊಲೋಪೊವರೆಗೆ ಉತ್ತರದಿಂದ ದಕ್ಷಿಣಕ್ಕೆ ಹಬ್ಬಿರುವ ಬಾಟ್ಸ್‍ವಾನದ ಬಹುಭಾಗ ಕಲಹರಿ ಅರೆ ಮರುಭೂಮಿ ಪ್ರದೇಶದಲ್ಲಿದೆ. ಸುಮಾರು 1219 ಮೀಟರ್ ಎತ್ತರದ ಪ್ರಸ್ಥಭೂಮಿಯಿಂದ ಈ ದೇಶ ಎರಡು ಭಾಗಗಳಾಗಿ ಒಡೆದಿದೆ. ಎರಡೂ ಬೇರೆ ಬೇರೆ ಜಲೋತ್ಸಾರಣ ವ್ಯವಸ್ಥೆಗಳಿಗೆ ಒಳಪಟ್ಟಿವೆ. ಈ ಪ್ರಸ್ಥಭೂಮಿಯ ಪೂರ್ವದಲ್ಲಿ ಹಲವು ತೊರೆಗಳು ಅಕ್ಷಾಂಶ ವೃತ್ತಗಳ ನೇರ ಹರಿದು ಮೆರಿಕೊ, ಲಿಂಪೋಪೊ ಮತ್ತು ನಟ್ಟಾನಿ ನದಿಗಳನ್ನು ಸೇರುತ್ತವೆ. ಪ್ರಸ್ಥಭೂಮಿಯ ಪಶ್ಚಿಮಕ್ಕಿರುವ ಪ್ರದೇಶ ಮರಳಿನಿಂದ ಕೂಡಿದೆ.

ಬಾಟ್ಸ್‍ವಾನದ ಮಾಧ್ಯ ಎತ್ತರ ಸುಮಾರು 1006 ಮೀಟರ್, ಇದು ಬಹುತೇಕ ಮಟ್ಟಸ ನೆಲ. ಅಲ್ಲಲ್ಲಿ ಭೂಮಿ ಸ್ವಲ್ಪಮಟ್ಟಿಗೆ ಅಲೆಗಳಂತೆ ಏರಿಳಿಯುತ್ತದೆ. ಸರಿಸುಮಾರು 46 ಕೋಟಿಯಿಂದ 57 ಕೋಟಿ ವರ್ಷಗಳಷ್ಟು ಪುರಾತನ ಪ್ರಿಕ್ಯಾಂಬ್ರಿಯನ್ ಶಿಲೆಯ ಮೇಲೆ ಕಲಹರಿಯ ಮರಳು ಹರಡಿದೆ. ಬಾಟ್ಸ್‍ವಾನದ ಮುಖ್ಯ ಜಲೋತ್ಸಾರಣ ವ್ಯವಸ್ಥೆಯನ್ನೊದಗಿಸುವ ನದಿ ಓಕವಾಂಗೊ. ಆಂಗೋಲದ ಎಲ್ಲೆಯಿಂದ ಆಗ್ನೇಯ ದಿಕ್ಕಿಗೆ ಹರಿಯುವ ಈ ನದಿ ಸುಮಾರು 10,359 ಚಕಿಮೀ. ವಿಸ್ತೀರ್ಣದ ತಗ್ಗು ನೆಲದಲ್ಲಿ ಹರಡಿ ಮುಂದುವರಿದು ನ್ಗಾಮಿ ಸರೋವರವಾಗಿ ಪರಿಣಮಿಸುತ್ತದೆ. ಪ್ರವಾಹಕಾಲದಲ್ಲಿ ಇದು ಪೂರ್ವಾಭಿಮುಖವಾಗಿ ಹರಿದು ಬೊಟೆಟಿ ನದಿಯನ್ನು ಕೂಡಿ ದೇಶದ ಮಧ್ಯದಲ್ಲಿರುವ ಕ್ಸಾವ್ ಸರೋವರ ದಾಟಿ ಮುಂದೆ ಮಕ್ಗಾಡಿಕ್ ಗಾಡಿ ಪಾನ್ಸ್ ಸೇರುತ್ತದೆ. ದೇಶದ ದಕ್ಷಿಣದ ಗಡಿಗಳಾಗಿ ಹರಿಯುವ ಮೊಲೊಪೊ, ರಾಮಟ್ಲಬಾಮಾ ಚಿಕ್ಕ ತೊರೆಗಳು.

ಕಲಹರಿಯನ್ನು ಮರುಭೂಮಿ ಎನ್ನುವುದಕ್ಕಿಂತ ದಾಹದ ನೆಲ ಎನ್ನಬಹುದು. ಅಲ್ಲಿ ಹುಲ್ಲೂ ಕಳ್ಳಿ ಜಾತಿಯ ಗಿಡಗಳೂ ಇವೆ. ಅಲ್ಲಿ ಬೆಳೆಯುವ ಕರಬೂಜ ಹಣ್ಣುಗಳು ಆದಿವಾಸಿಗಳ ಆಹಾರ. ನೆಲದ ಅಡಿಯಲ್ಲಿ ಬಲು ಹತ್ತಿರದಲ್ಲೇ ನೀರು ಇರುವ ಎಡೆಗಳಲ್ಲಿ ಸಸ್ಯ ದಟ್ಟವಾಗಿದೆ. ಬಾಟ್ಸ್‍ವಾನದ ನೈರುತ್ಯ ಮೂಲೆಯಲ್ಲಿ ಮಾತ್ರ ಮರಳ ರಾಶಿಗಳಿವೆ. ಆ ಭಾಗ ನಿಜಕ್ಕೂ ಮರುಭೂಮಿಯೇ.
ವಾಯುಗುಣ: ಮಕರಸಂಕ್ರಾಂತಿವೃತ್ತ ಈ ದೇಶದ ದಕ್ಷಿಣ ಮಧ್ಯದಲ್ಲಿ ಹಾದು ಹೋಗುತ್ತದೆ. ಬಾಟ್ಸ್‍ವಾನದ್ದು ಸಮಶೀತೋಷ್ಣ ಹಾಗೂ ಉಪೋಷ್ಣ ವಾಯುಗುಣ. ಅಕ್ಟೋಬರ್‍ನಿಂದ ಮಾರ್ಚ್ ತನಕ ಬೇಸಗೆ. ಆಗ ಉಷ್ಣತೆ 380ಅ ವರೆಗೂ ಏರುವುದುಂಟು. ಏಪ್ರಿಲ್‍ನಿಂದ ಸೆಪ್ಟೆಂಬರ್ ತನಕ ಚಳಿಗಾಲ. ಆ ಋತುವಿನಲ್ಲಿ ಆಗಾಗ ಮಂಜು ಬೀಳುತ್ತದೆ. ಉಷ್ಣತೆ 00ಅ ಗಿಂತ ಕೆಳಕ್ಕೆ ಇಳಿಯಬಹುದು. ಆಗಸ್ಟ್‍ನಲ್ಲಿ ಕಲಹರಿಯಿಂದ ಬೀಸುವ ಬಿಸಿಗಾಳಿ ಮರಳನ್ನು ಹೊತ್ತು ತಂದು ದೇಶದಲ್ಲೆಲ್ಲ ಎರಚುತ್ತದೆ. ಬಾಟ್ಸ್‍ವಾನದ ಸರಾಸರಿ ವಾರ್ಷಿಕ ಮಳೆ ಸುಮಾರು 457 ಮಿಮೀ. ಗರಿಷ್ಠ ಹಾಗೂ ಕನಿಷ್ಠ ಮಳೆಗಳು ಅನುಕ್ರಮವಾಗಿ ಉತ್ತರದಲ್ಲಿ 635 ಮಿಮೀ ಮತ್ತು ನೈರುತ್ಯದಲ್ಲಿ 127ಮಿಮೀ ಅಥವಾ ಅದಕ್ಕಿಂತ ಕಡಿಮೆ. ಡಿಸೆಂಬರ್‍ನಿಂದ ಏಪ್ರಿಲ್ ಕೊನೆಯತನಕ ಮಳೆಗಾಲ. ಮಳೆ ಸಾಮಾನ್ಯವಾಗಿ ಧಾರಾಕಾರ. ಚಕ್ರೀಯವಾಗಿ ಬರಗಾಲಗಳು ಬರುವುದುಂಟು. ಅವು ಹಲವು ವರ್ಷಗಳ ಕಾಲ ಮುಂದುವರಿಯಬಹುದು. ಅಭಾವ ಪರಿಸ್ಥಿತಿ ಬಹಳ ತೀವ್ರವಾಗಿರುತ್ತದೆ. 1965-66ರಲ್ಲಿ ಇಂಥ ಪರಿಸ್ಥಿತಿ ಬಂದಿತ್ತು.

ಸಸ್ಯ, ಪ್ರಾಣಿ ಜೀವನ: ದೇಶದ ಬಹುಭಾಗದಲ್ಲಿ ಕಳ್ಳಿ ಜಾತಿಯ ಗಿಡಗಳಿಂದ ಕೂಡಿದ ಹುಲ್ಲುಗಾಡು (ಸವಾನ) ಇದೆ. ಈಶಾನ್ಯದಲ್ಲಿ ಸಾಮಾನ್ಯವಾಗಿರುವ ಸಸ್ಯಗಳು ಮೊಪೇನ್, ಮೊಗೊನೊನೊ ಮತ್ತು ಮೊಕುಸಿ, ಮಧ್ಯ ಕಲಹರಿಯಲ್ಲಿ ಸಾಮಾನ್ಯವಾಗಿರುವ ಸಸ್ಯ ಮೊರುಕುರು. ಚೋಬೆ ನದಿಯ ದಂಡೆಯ ಮೇಲೆ ಮಾತ್ರ ನಿಜವಾದ ಅರ್ಥದಲ್ಲಿ ಕಾಡು ಉಂಟು. ಇಲ್ಲಿ ಆಫ್ರಿಕನ್ ಮರಗಳು ಹಲವು ಇವೆ (ಮೋಕ್ವ, ಮೊಕುಸಿ, ಮೊನಾಟೊ).

ಮೈದಾನದಲ್ಲಿ ಹಲವಾರು ವನ್ಯಪ್ರಾಣಿಗಳು ಹಿಂಡುಹಿಂಡಾಗಿವೆ. ಚೋಬೆ, ಮೊರೆಮೆ, ಬಕವಾಂಗೊ ಮುಖಜಭೂಮಿ, ನ್ಗಾಮಿ ಸರೋವರ, ಮಕ್ಗಾಡಿಕಾಡಿ ಪಾನ್ಸ್ ಮತ್ತು ಕಲಹರಿ ಇವು ರಾಷ್ಟ್ರೀಯ ವನ್ಯಮೃಗ ಸಂರಕ್ಷಣ ಪ್ರದೇಶಗಳು. ಬಗೆಬಗೆಯ ಜಿಂಕೆಗಳು, ಸಿಂಹ, ಆನೆ, ಚಿರತೆ, ನೀರಾನೆ, ಜಿರಾಫೆ, ಕಾಡಮ್ಮೆ, ಮೊಸಳೆ ಮತ್ತು ಹಾವು ಮುಂತಾದವು ಇವೆ. ಉಷ್ಟ್ರಪಕ್ಷಿ, ಪೆಲಿಕಾನ್, ಗಿಡಗ ಸಾಮಾನ್ಯ. ಒಕಾವಾಂಗೊ ಮತ್ತು ಚೋಬೆ ನದಿಗಳಲ್ಲಿ ಹಲ ಬಗೆಯ ಮೀನುಗಳುಂಟು.

ಜನಜೀವನ: ಬಾಟ್ಸ್‍ವಾನದ ಜನರು ಸ್ಥೂಲವಾಗಿ ಎಂಟು ಮುಖ್ಯ ಆದಿವಾಸಿ ಪಂಗಡಗಳಿಗೆ ಸೇರಿದವರು. ಪ್ರತಿಯೊಂದು ಪಂಗಡಕ್ಕೂ ಅದರದೇ ಆದ ಪ್ರದೇಶವಿದೆ. ಅದಕ್ಕೊಬ್ಬ ಮುಖ್ಯಸ್ಥ ಇರುತ್ತಾನೆ. ನೆಲದ ಒಡೆತನ ಸಾಮುದಾಯಿಕ. ಅದನ್ನು ಪರಭಾರೆ ಮಾಡುವಂತಿಲ್ಲ. ಅತ್ಯಂತ ದೊಡ್ಡ ಪಂಗಡ ನಗ್ವಾಟೊ. ಇದರ ಜನಸಂಖ್ಯೆ ದೇಶದ ಒಟ್ಟು ಜನಸಂಖ್ಯೆಯ ಮೂರನೆಯ ಒಂದರಷ್ಟು. ಒಟ್ಟು ನೆಲದ ಐದನೆಯ ಒಂದು ಭಾಗ ಇದಕ್ಕೆ ಸೇರಿದೆ. ಇತರ ಮುಖ್ಯ ಪಂಗಡಗಳು ಕ್ವೇನ, ನಗ್ವಾಕೇಟ್ಸೆ, ಕಗಾಟ್ಲ, ಬಮಲೆಟೆ ಮತ್ತು ಟ್ಲೋಕ್ವ.

ಬಾಟ್ಸ್‍ವಾನದ ಪಂಗಡಗಳು ಇತರ ಆಫ್ರಿಕನ್ ದೇಶಗಳ ಪಂಗಡಗಳಂತಲ್ಲ. ಪಟ್ಟಣಗಳಲ್ಲಿ ವಾಸಿಸುವ ಪದ್ಧತಿ ಹಿಂದಿನಿಂದ ಬಂದಿದೆ. ಆ ಪಟ್ಟಣಗಳು ದನಗಳ ಹುಲ್ಲುಗಾವಲುಗಳಿಗೆ ಬಲು ದೂರದಲ್ಲಿರುತ್ತವೆ. ನಿವಾಸಿಗಳು ಮುಖ್ಯವಾಗಿ ದನಗಾಹಿಗಳು. ಒಂದೊಂದು ಮಂದೆಯಲ್ಲೂ ಸಾವಿರಾರು ದನಗಳಿರುತ್ತವೆ. 

ಬಾಟ್ಸವಾನದ ಜನರ ಜೀವನದಲ್ಲಿ ಅತ್ಯಂತ ಮುಖ್ಯ ಅಂಶಗಳೆಂದರೆ ದನ. ನೆಲ ಮತ್ತು ಮಳೆ, ಜನ, ದನಗಳ ಬದುಕು ಮಳೆಯನ್ನೇ ಅವಲಂಬಿಸಿರುತ್ತದೆ. ಆದರೆ ಮಳೆ ಅನಿಶ್ಚಿತ. ವರ್ಷವರ್ಷವೂ ಸಾವಿರಾರು ಮಂದಿ ತರುಣರು ತಮ್ಮ ಹಳ್ಳಿಗಳನ್ನು ಬಿಟ್ಟು ಉದ್ಯೋಗ ಅರಸುತ್ತ ಅಥವಾ ಶಿಕ್ಷಣಾಕಾಂಕ್ಷಿಗಳಾಗಿ ನೆರೆಯ ದಕ್ಷಿಣ ಆಫ್ರಿಕಕ್ಕೆ ವಲಸೆ ಹೋಗುತ್ತಾರೆ. ಆದಾಗ್ಯೂ ದೇಶದಲ್ಲಿ ನಗರೀಕರಣ ಪ್ರವೃತ್ತಿ ಬೆಳೆದಿಲ್ಲ. ದಕ್ಷಿಣ ಆಫ್ರಿಕ ಮತ್ತು ಜಿಂಬಾಬ್ವೆಯೊಂದಿಗೆ ಬಾಟ್ಸ್‍ವಾನವನ್ನು ಕೂಡಿಸುವ ರೈಲುಮಾರ್ಗದ ಉದ್ದಕ್ಕೂ ನೆಲೆಗೊಂಡಿರುವ ಆರು ಸಣ್ಣ ಪಟ್ಟಣಗಳಲ್ಲಿ ಮಾತ್ರ ಉದ್ಯೋಗಗಳು ಸ್ವಲ್ಪಮಟ್ಟಿಗೆ ದೊರಕುತ್ತವೆ. ಇವು ಹಳೆಯ ವ್ಯವಸ್ಥೆಯ ಕಟ್ಟುಕಟ್ಟಳೆಗಳಿಂದ ವಿಮೋಚನೆ ಸಾರುವ ಕೇಂದ್ರಗಳಂತಿವೆ. ರಾಷ್ಟ್ರೀಯ ಏಕತೆಯ ಕೇಂದ್ರಗಳೂ ಆಗಿವೆ.
ಬಾಟ್ಸ್‍ವಾನದ ರಾಜಧಾನಿ ಗ್ಯಾಬರೋನೆ. ಸ್ವಾತಂತ್ರ್ಯಗಳಿಸುವುದಕ್ಕೆ ಮುಂಚೆ ಮಾಫೆಕಿಂಗ್ ರಾಜಧಾನಿ ಆಗಿತ್ತು. ಗಯಾಬರೋನೆ ವೇಗವಾಗಿ ಬೆಳೆಯುತ್ತಿದೆ. ಇದಕ್ಕಿಂತ ದೊಡ್ಡ ಪಟ್ಟಣ ಬಮಾಂಗ್ವಾಟೋ (ಜನಸಂಖ್ಯೆ 36,000). ಫ್ರಾನ್ಸಿಸ್‍ಟೌನ್-33,000 (1981). ವಾಣಿಜ್ಯ ಕೇಂದ್ರ, ಇಲ್ಲಿ ದಕ್ಷಿಣ ಆಫ್ರಿಕದಿಂದ ಬಂದ ಐರೋಪ್ಯರು ಪ್ರಧಾನವಾಗಿದ್ದಾರೆ. ಲೊಬಾಟ್ಸೆ ಇನ್ನೊಂದು ಪಟ್ಟಣ(12,000).

ಬಾಟ್ಸ್‍ವಾನದ ಎರಡು ಅಧಿಕೃತ ಭಾಷೆಗಳು ಸೆಟ್ಸ್‍ವಾನ ಮತ್ತು ಇಂಗ್ಲಿಷ್. ವಿದ್ಯಾವಂತರು ಮಾತ್ರ ಇಂಗ್ಲಿಷ್ ಬಲ್ಲರು, ಆಫ್ರಿಕಾನ್ಸ್ ಭಾಷೆಯನ್ನು ಬಿಳಿಯ ಅಲ್ಪಸಂಖ್ಯಾತರು ಆಡುತ್ತಾರೆ. ಇಲ್ಲಿಯ ಬಹುತೇಕ ಜನರು ಹೆಸರಿಗೆ ಕ್ರೈಸ್ತರು. ಕ್ರೈಸ್ತಧರ್ಮವನ್ನು ದಿನಚರಿಯಲ್ಲಿ ಅನುಸರಿಸುತ್ತಿರುವವರು ಶೇಕಡಾ 20-30 ರಷ್ಟು ಜನ ಮಾತ್ರ. ವಿವಿಧ ಕ್ರೈಸ್ತಮತೀಯ ಶಾಖೆಗಳು ಇಲ್ಲಿವೆ.
ಜಲಾಭಾವದಿಂದಾಗಿ ಬಾಟ್ಸ್‍ವಾನದ ಜನಸಾಂದ್ರತೆ ಬಲು ವಿರಳ. ಜನ ಸಂಖ್ಯೆಯ ವಾರ್ಷಿಕ ಏರಿಕೆಯ ದರ ಶೇಕಡಾ 3. ಕೃಷಿ ಯೋಗ್ಯ ನೆಲದಲ್ಲಿ ಶೇಕಡಾ 5ರಷ್ಟು ಮಾತ್ರ ಸಾಗುವಳಿಯಾಗುತ್ತಿದೆ. ಜನಸಂಖ್ಯೆಯ ಶೇಕಡಾ 80ರಷ್ಟು ಮಂದಿ ನೆಲಸಿರುವುದು ಪೂರ್ವ ಭಾಗದಲ್ಲಿ. ಇಲ್ಲಿ ಜನಸಾಂದ್ರತೆ ಚಕಿಮೀಗೆ ಸುಮಾರು 3 ಮಂದಿಯಾದರೆ ಉಳಿದ ಭಾಗದಲ್ಲಿ 1.
ಆರ್ಥಿಕ ಪರಿಸ್ಥಿತಿ: ಬಾಟ್ಸ್ವಾನದ ಆರ್ಥಿಕತೆಯಲ್ಲಿ ದನಗಳೇ ಮುಖ್ಯ. ದೇಶದಲ್ಲಿ ಸುಮಾರು 15,00,000 ದನಗಳಿವೆ. ಇವು ಬಹುತೇಕ ಅಡ್ಡ ತಳಿಗಳು. ಗಣಿಗಾರಿಕೆ ಬೆಳೆಯುತ್ತಿದೆ. ಫ್ರಾನ್ಸಿಸ್‍ಟೌನ್‍ಗೆ ಸುಮಾರು 160 ಕಿಮೀ ದೂರದಲ್ಲಿ 3.7 ಕೋಟಿ ಟನ್ ನಿಕಲ್ ಮತ್ತು ತಾಮ್ರ ನಿಕ್ಷೇಪಗಳಿವೆ. ಹಣ ಬೆಲೆ ಬಹಳ ಕಡಿಮೆ, ಬೇಸಾಯ ಮುಖ್ಯವಾಗಿ ಜೀವನಾಧಾರ. ಬಾಟ್ಸ್‍ವಾನದಲ್ಲಿ ಆಗಾಗ್ಗೆ ಅಭಾವ ಸಂಭವಿಸಿ, ಆಹಾರದ ಆಮದು ಅಗತ್ಯವಾಗುತ್ತದೆ.
ದೇಶದ ಎರಡು ದೊಡ್ಡ ಕೊರತೆಗಳೆಂದರೆ ನೀರು ಮತ್ತು ಜನಬಲ. ಬೇಸಾಯಕ್ಕೆ ಹಾಗೂ ಗಣಿಗಾರಿಕೆ ವ್ಯವಸಾಯಗಳಿಗೆ ಸಾಕಷ್ಟು ಜನರಿಲ್ಲ, ಒರಾಪ ವಜ್ರಗಣಿಗಳು ಆಂಗ್ಲೊ-ಅಮೆರಿಕನ್ ಸಂಸ್ಥೆಗೆ ಒಳಪಟ್ಟಿವೆ. ಷಪಿ ಗಣಿಗಾರಿಕೆಯ ಸಂಕೀರ್ಣದಲ್ಲಿ ನಿಕಲ್ ಮತ್ತು ತಾಮ್ರ ತೆಗೆಯಲಾಗುತ್ತಿದೆ. ಈ ಪ್ರದೇಶ ಬೆಳೆಯುತ್ತಿದೆ. ಇದು ಅಮೆರಿಕನ್ ನಾಯಕತ್ವದ ಅಂತರರಾಷ್ಟ್ರೀಯ ಆಸಕ್ತಿಗಳಿಗೆ ಒಳಪಟ್ಟಿದೆ.

ಮಾಂಸ ಸಂಸ್ಕರಣ ಮತ್ತು ಗಣಿಗಾರಿಕೆ ಅವಲಂಬಿಸಿದ ಕೆಲವು ಸಣ್ಣ ಉದ್ಯಮಗಳನ್ನು ಬಿಟ್ಟರೆ ಬಾಟ್ಸ್‍ವಾನದಲ್ಲಿ ಕೈಗಾರಿಕೆ ಬೆಳೆದಿಲ್ಲ.

ಸಾರಿಗೆ: ದೇಶದಲ್ಲಿ ಸುಮಾರು 8,000 ಕಿಮೀ ರಸ್ತೆಗಳಿವೆ. ಫ್ರಾನ್ಸಿಸ್‍ಟೌನನ್ನು ವಾಯವ್ಯದೊಂದಿಗೂ ನೆರೆಯ ಜಾóಂಬಿಯದ ಲಿವಿಂಗ್‍ಸ್ಟನ್ನೊಂದಿಗೂ ಕೂಡಿಸುವ ರಸ್ತೆಗಳ ನಿರ್ಮಾಣವಾಗಿದೆ. ಬಾಟ್ಸ್‍ವಾನದ ಏಕೈಕ ರೈಲುಮಾರ್ಗದ ಉದ್ದ 634 ಕಿಮೀ. ದೇಶದ ಪ್ರಮುಖ ಪಟ್ಟಣಗಳಿಗೂ ನೆರೆಯ ದೇಶಗಳಿಗೂ ವಿಮಾನ ಸಂಪರ್ಕವುಂಟು.

ಇತಿಹಾಸ, ಆಡಳಿತ: ಬಾಟ್ಸ್‍ವಾನ ಬ್ರಿಟಿಷ್ ಆರಕ್ಷಿತ ಪ್ರದೇಶವಾಗಿತ್ತು. ಆಗ ಇದರ ಹೆಸರು ಬೆಚುವಾನಲ್ಯಾಂಡ್. 1966ರಲ್ಲಿ ಇದು ಸ್ವತಂತ್ರವಾಯಿತು. ಆಗಿನಿಂದ ಇದರ ಹೆಸರು ಬಾಟ್ಸ್‍ವಾನ. ಇದು ಅಲ್ಲಿಯ ಜನರ ಹೆಸರು ಕೂಡ. ಆ ಹೆಸರನ್ನೇ ದೇಶಕ್ಕೂ ಇಡಲಾಗಿದೆ. ಬಾಟ್ಸ್‍ವಾನ ಕಾಮನ್‍ವೆಲ್ತಿನ ಆಫ್ರಿಕನ್ ಒಗ್ಗಟ್ಟು ಸಂಸ್ಥೆಯ ಮತ್ತು ಪೂರ್ವ ಹಾಗೂ ಮಧ್ಯ ಆಫ್ರಿಕನ್ ಪ್ರಾದೇಶಿಕ ಸಂಸ್ಥೆಯ ಸದಸ್ಯ ದೇಶವಾಗಿದೆ. 

ದೇಶದ ವೈಧಾನಿಕ ಅಧಿಕಾರ ಇರುವುದು ಸಂಸತ್ತಿನಲ್ಲಿ. ಇದರಲ್ಲಿ ಅಧ್ಯಕ್ಷನೂ 31 ಚುನಾಯಿತ ಸದಸ್ಯರೂ 4 ವಿಶೇಷವಾಗಿ ಚುನಾಯಿತ ಸದಸ್ಯರೂ ಮಹಾನ್ಯಾಯವಾದಿಯೂ ಇರುತ್ತಾರೆ. ಅಧ್ಯಕ್ಷ ಆಡಳಿತದ ಮುಖ್ಯಸ್ಥ. ಅವನು ಸಂಪುಟದ ಸಭೆಯ ಅಧ್ಯಕ್ಷತೆ ವಹಿಸುತ್ತಾನೆ. ಉಪಾಧ್ಯಕ್ಷ ಹಾಗೂ ಎಂಟು ಮಂದಿ ಇತರ ಮಂತ್ರಿಗಳು ಸಂಪುಟದ ಉಳಿದ ಸದಸ್ಯರು, ಐದು ವರ್ಷಕ್ಕೊಮ್ಮೆ ಅಧ್ಯಕ್ಷರ ಹಾಗೂ ಸಂಸತ್ ಸದಸ್ಯರ ಚುನಾವಣೆ. ಪಂಗಡಗಳ ಮುಖ್ಯರ ಸದನವೊಂದು ಇದೆ. ಇದು ಸರ್ಕಾರಕ್ಕೆ ಸಲಹೆ ನೀಡುತ್ತದೆ. ಪಂಗಡಗಳ ವ್ಯವಹಾರಗಳ ಮೇಲೆ ಪರಿಣಾಮ ಬೀರುವ ಯಾವುದೇ ಶಾಸನವನ್ನು ಸಂಸತ್ತು ಮಾಡುವಂತಿಲ್ಲ. ಸ್ಥಳೀಯ ಆಡಳಿತಕ್ಕೆ ಒಂಬತ್ತು ಜಿಲ್ಲಾ ಮಂಡಲಿಗಳೂ ಗ್ಯಾಬರೋನೆ, ಫ್ರಾನ್ಸಿಸ್‍ಟೌನ್ ಮತ್ತು ಲೊಬಾಟ್ಸೆಗೆ ಪಟ್ಟಣ ಮಂಡಲಿಗಳೂ ಇವೆ.

ದೇಶದಲ್ಲಿ ನಾಲ್ಕು ರಾಷ್ಟ್ರೀಯ ಪಕ್ಷಗಳಿವೆ. ಅವು ಬಾಟ್ಸ್‍ವಾನ ಜನತಂತ್ರಾತ್ಮಕ ಪಕ್ಷ, ಬಾಟ್ಸ್‍ವಾನ ಜನತಾಪಕ್ಷ, ಬಾಟ್ಸ್‍ವಾನ ಸ್ವತಂತ್ರತಾ ಪಕ್ಷ ಮತ್ತು ಬಾಟ್ಸ್‍ವಾನ ರಾಷ್ಟ್ರೀಯ ರಂಗ. ಇವುಗಳಲ್ಲಿ ಎಲ್ಲ ಪಂಗಡಗಳವರೂ ಸದಸ್ಯರಾಗಿದ್ದಾರೆ. ಆದ್ದರಿಂದ ಇವು ರಾಷ್ಟ್ರೀಯ ಪಕ್ಷಗಳು.

ಅದೇಶದ ನ್ಯಾಯ ಪರಿಪಾಲನೆಗೆ ಉಚ್ಚನ್ಯಾಯಾಲಯ, ಮೇಲ್ಮನವಿ ನ್ಯಾಯಾಲಯ ಮತ್ತು ಅಧೀನ ನ್ಯಾಯಾಲಯಗಳು ಇವೆ. ಆಫ್ರಿಕನ್ ನ್ಯಾಯಾಲಯಗಳು ಇವೆ. ಇವುಗಳ ಅಧಿಕಾರ ಸೀಮಿತ. 
(ಎಚ್.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ